Posts

Showing posts from October, 2008
ಕನಕದಾಸರು ಮತ್ತು ಗೌರವ, ಪ್ರಶಸ್ತಿಯ ಆಸೆ. ಮಾಸ್ತಿಯವರು ಕನಕದಾಸರ ಕುರಿತು ಬರೆಯುವಾಗ ಹೀಗೆ ಬರೆದಿದ್ದಾರೆ . "ಕುರುಬ ವಂಶದಲ್ಲಿ ಜನಿಸಿ ತಮ್ಮ ಪಾಳೆಯಪಟ್ಟನ್ನು ಕೆಲವುಕಾಲ ಆಳಿ ಆಮೇಲೆ ಹರಿದಾಸನ ಪದವಿಗೇರಿದ ಕನಕದಾಸರು ತಮ್ಮ ಬಾಳಿನ ರೀತಿಯಿಂದ ತಮ್ಮ ಗುರು ವ್ಯಾಸರಾಯರಿಗೆ ಮೆಚ್ಚುಗೆಯ ಶಿಷ್ಯರಾದರು . ದ್ವಿಜರಾದ ಗುರು , ದ್ವಿಜವಂಶದವನಲ್ಲದ ಈ ಶಿಷ್ಯ ತಮಗಿಂತ ಹೆಚ್ಚಿನ ಸಿದ್ಧಿಯನ್ನು ಪಡೆದಿರುವ ದೈವಭಕ್ತ ಎಂದು ಇವರನ್ನು ಹೊಗಳುತ್ತಿದ್ದರಂತೆ . ವ್ಯಾಸರಾಯರು ಕನಕದಾಸರು ತಮಗಿಂತ ಹಿರಿಯರೆಂದು ಹೊಗಳಿದರೂ ಕನಕದಾಸರು ತಾವು ಗುರುವಿನ ಪೀಠದಲ್ಲಿ ಕುಳಿತೇನು ಎಂದು ಮುಂದರಿಯಲಿಲ್ಲ. ಈ ನಡತೆಯ ರಹಸ್ಯ ಏನು ಎಂದು ಆಧುನಿಕರಾದ ನಾವು ವಿಚಾರ ಮಾಡಬೇಕು. " ಇಲ್ಲಿನ "ರಹಸ್ಯ" ಏನೆಂದು ನನಗೆ ತಿಳಿಯಲಿಲ್ಲ ; ( ನಿಮಗೆ ಗೊತ್ತಿದ್ದರೆ ಅಥವಾ ತೋಚಿದರೆ ತಿಳಿಸಿ ) . ಆದರೆ ಇಂಥ ಜನ ನಮ್ಮ ನಡುವೆ ಇದ್ದಾರೆ , ಅರ್ಹತೆಯಿದ್ದೂ ಪ್ರಶಸ್ತಿ,ಗೌರವ ಬಯಸದೆ "ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ? " ಎಂದು ಹಾಡಿಕೊಂಡು ಇರುವವರು . ಇಂಥವರೇ ಈ ರಹಸ್ಯವನ್ನು ತಿಳಿಹೇಳಿದರೆ ಬಲು ಚೆನ್ನು.
ಜೀವನಕಲೆ ಕರ್ಣಾಟಕದ ಕಲೆ ಎಂಬ ಲೇಖನದಲ್ಲಿ ಮಾಸ್ತಿಯವರು ಹೀಗೆ ಬರೆದಿದ್ದಾರೆ ಬಹುಕಾಲ ಬದುಕಬೇಕು. ತುಂಬ ಸುಖಪಡಬೇಕು. ಜೊತೆಯ ಜೀವನಗಳನ್ನು ಆದಷ್ಟು ಸುಖ ಪಡಿಸಬೇಕು ಎನ್ನುವುದು ಜೀವನದ ಆಳದಲ್ಲಿರುವ ಆಸೆ , ಹಂಬಲಿಕೆ ; ಮನುಷ್ಯನ ಇತಿಹಾಸವೆಲ್ಲ ಇದರಿಂದ ಬೆಳೆದಿದೆ. ಕನ್ನಡದ ಜನ ಈ ಉನ್ನತಿಯನ್ನ ಸಾಧಿಸಿದ್ದಾರೆ. ಸ್ವಚ್ಛತೆ , ಅಲಂಕಾರ , ರಂಗೋಲಿ , ಹಾಡು , ಸಂಗೀತ , ನೃತ್ಯ , ಶಿಲ್ಪಕಲೆ , ಬಯಲಾಟ, ಯಕ್ಷಗಾನ, ಹಬ್ಬಹುಣ್ಣಿವೆ , ಜಾತ್ರೆ , ಪೂಜೆ ಪುನಸ್ಕಾರ / ಇತ್ಯಾದಿ .
ಕನ್ನಡ ಶಬ್ದ ಸಂಪತ್ತು ಕುರಿತು ಮಾಸ್ತಿ. ಕನ್ನಡಕ್ಕೆ ಆಗಿಬಂದ ಸಂಸ್ಕೃತ ಪದ ಕನ್ನಡದ ಸ್ವತ್ತೇ . ಅದನ್ನು ಬಳಸಲು ಹಿಂದೆಗೆಯುವುದು ಭಾಷೆಯನ್ನರಿಯದವನ ಲಕ್ಷಣ. ಕನ್ನಡದಲ್ಲಿ ಶಬ್ದಗಳಿಲ್ಲದಿರುವದರಿಂದ ಈ ವಿಷಯ ಆ ವಿಷಯವನ್ನು ಹೇಳಲಾಗುವದಿಲ್ಲ ಎನ್ನುವುದು ನಮ್ಮಲ್ಲಿ ಕೆಲವರ ಅಭಿಪ್ರಾಯ. ಇದು ಕನ್ನಡವನ್ನು ಕಲಿಯದೆ ಅದರ ವಿಚಾರವನ್ನು ಮಾತನಾಡುವುದರ ಫಲ. ರತ್ನಾಕರನು ಕನ್ನಡದಲ್ಲಿ ಜೀವನ , ಮೋಕ್ಷ, ರಾಷ್ಟ್ರ , ಸಂಸಾರವನ್ನು ಕುರಿತ ಎಷ್ಟು ಗಹನವಾದ ವಿಷಯಗಳನ್ನು ಎಷ್ಟು ಸುಲಭವಾದ ಪದಗಳಿಂದ ನಿರೂಪಿಸಿದ್ದಾನೆನ್ನುವುದನ್ನು ನೋಡಿದವರು ಕನ್ನಡವನ್ನು ಕುರಿತು ಈ ಹೀನಾಯವನ್ನು ನುಡಿಯಲಾರರು. ಮಹಾಕವಿ ಕಾವ್ಯವನ್ನು ರಚಿಸಿದ್ದು ಸಾರ್ಥಕವಾಗಬೇಕಿದ್ದರೆ ಅವನ ಶಬ್ದ ಸಂಪತ್ತು , ಅದರ ಹಿಂದಿನ ಭಾವ ಸಂಪತ್ತು ಎಲ್ಲ ಕಿರಿಯರಿಗೆ ಸಿದ್ಧಿಸಬೇಕು. ಅದಾಗದಿದ್ದರೆ ತಾಯಿ ಅಡುಗೆ ಮಾದಿತ್ತು ಮಕ್ಕಳು ಉಣ್ಣದಂತೆ ; ಅಡುಗೆ ಮಾಡಿದ ಶ್ರಮ ವ್ಯರ್ಥ. ಮಾಡಿದ ಜೀವಕ್ಕೆ ತೃಪ್ತಿಯಿಲ್ಲ; ಮಕ್ಕಳ ಹಸಿವಂತೂ ಹಾಗೆಯೇ ಉಳಿಯುವುದು.
ಕಾಳಿದಾಸನು ಸರಸ್ವತಿಗೆ ಬೈದನೇ ? ಅದೂ ಏನೆಂದು? ನಾನು ಮಾಸ್ತಿಯವರ ಒಂದು ಪುಸ್ತಕ ಓದುವಾಗ ಈ ವಿಷಯ ಕಣ್ಣಿಗೆ ಬಿತ್ತು. ಒಮ್ಮೆ ಕಾಳಿದಾಸ ದಂಡಿ ಇವರಲ್ಲಿ ಯಾರ ಕವಿತೆ ಶ್ರೇಷ್ಠ ಎಂದು ಪ್ರಶ್ನೆ ಬಂದಿತು. ಇದನ್ನು ನಿರ್ಣಯಿಸುವದಕ್ಕೆ ಯಾರಿಗೂ ಧೈರ್ಯವಿಲ್ಲ. ಸರಸ್ವತಿಯನ್ನು ಕೇಳೋಣ ಎಂದು ಒಪ್ಪಿದರು . ದೇವಿ ಪ್ರತ್ಯಕ್ಷವಾದಾಗ ದಂಡಿ ಒಂದು ಶ್ಲೋಕವನ್ನು ಹೇಳಿದನು. ಕಾಳಿದಾಸ ಒಂದು ಶ್ಲೋಕವನ್ನು ಹೇಳಿದನು. ಶ್ಲೋಕ ಯಾವುವು ಈಗ ನಮಗೆ ಗೊತ್ತಿಲ್ಲ. ಶ್ಲೋಕಗಲನ್ನು ಹೇಳಿದ ಮೇಲೆ ಕವಿಗಳು ತೀರ್ಪನ್ನು ಬೇಡಿ ಕೈ ಮುಗಿದು ನಿಂತರು. ದೇವಿ , "ಕವಿರ್ದಂಡೀ, ಕವಿರ್ದಂಡೀ , ನಸಂಶಯಃ " ಎಂದಳು . ದಂಡಿಗೆ ಸಂತೋಷ ಆಯಿತು. ಅವನು ಹೆಮ್ಮೆಯಿಂದ ಕಾಳಿದಾಸನ ಕಡೆ ನೋಡಿದನು. ಕಾಳಿದಾಸನಿಗೆ ಅಸಾಧ್ಯ ಕೋಪ ಬಂದಿತು. ಅವನು "ಹೇ ರಂಡೇ ಅಹಂ ಕೋವಾ " ( ಹಾಗಾದರೆ ನಾನು ಯಾರು?) ಎಂದು ಕೇಳಿದನು . ದೇವಿ "ತ್ವಮೇವಾಹಂ,ತ್ವಮೇವಾಹಂ, ತ್ವಮೇವಾಹಂ, ನಸಂಶಯಃ " ಎಂದಳು ; ಮರೆಯಾದಳು. ಕಾಳಿದಾಸ ಎಲ್ಲ ಕವಿಗಳಿಗಿಂತ ಹೆಚ್ಚು ಎಂದು ಕವಿ ಸಮುದಾಯ ಒಪ್ಪಿತು.