ಕೊಲೆಗಾರರು ಯಾರು ? ಒಂದು ಹಾಸ್ಯ ಲೇಖನ

ಸಂಪದದಲ್ಲಿ ’ ಕೊಲೆಗಾರರು ಯಾರು ? ’ ಬರಹ ಓದುತ್ತಿದ್ದಂತೆ ನಾನು ಹಿಂದೊಮ್ಮೆ ಸುಧಾದಲ್ಲಿ ಓದಿದ ಹಾಸ್ಯ ಬರಹ ನೆನಪಾಯಿತು . ಅದು ಯಾರು ಬರೆದಿದ್ದದ್ದು ನೆನಪಿಲ್ಲ ; ವಿಷಯ ಮುಖ್ಯ ತಾನೆ ? ಓದಿ ಸಂತಸ ಪಡಿ .

ಒಬ್ಬ ಪತ್ತೇದಾರಿ ಸಾಹಿತ್ಯದ ಓದಿನ ಗೀಳಿನ ಮನುಷ್ಯ ಇರ್ತಾನೆ . ಅವನಿಗೆ ಒಂದ್ಸಲ ಓದಕ್ಕೆ ಏನೂ ಇಲ್ದೆ ತನ್ನ ಗೆಳೆಯನ ಹತ್ರ ಹೋಗಿ ಓದಕ್ಕೆ ಏನಾದ್ರೂ ಕೊಡೋ ಅಂತ ಕೇಳಿದಾಗ ಅವನು ಕೈಗೆ ಸಿಕ್ಕ ಪುಸ್ತಕಾನ ಕೊಟ್ಟು ಕಳಿಸ್ತಾನೆ . ಅದು ಷೇಕ್ಸಪಿಯರನ ಮ್ಯಾಕ್‍ಬೆತ್ ನಾಟಕದ ಅನುವಾದ . ಡಿ. ವಿ. ಜಿ ಅವರದ್ದು , ಹಳೆಗನ್ನಡ ಶೈಲಿಯಲ್ಲಿದೆ .
ಮರುದಿನ ಅವನು ಬಂದು ಪುಸ್ತಕ ವಾಪಸ್ ಕೊಡ್ತಾ ಹೇಳ್ತಾನೆ ... ನಂಗೆ ಮ್ಯಾಕ್‍ಬೆತ್ ಮಾಡಿದ್ದು ಅನ್ನಿಸ್ಲಿಲ್ಲ .
’ಏನೋ?’
’ಅದೇ ಮರ್ಡರು ’
’ಯಾಕೋ’
ಈಗ ಅವರ ನಡುವೆ ಚರ್ಚೆ . ನಾನಾ ಥಿಯರಿಗಳು . ಆ ನಾಟಕದಲ್ಲಿ ಆಗಿರೋ ಕೊಲೇನ ಯಾರು ಮಾಡಿದ್ದು ? ಅಂತ !
--ಕ್ಲಿಯರ್ ಆಗೇ ಇದೆಯಲ್ಲೋ ? ಮ್ಯಾಕ್‍ಬೆತ್ ಮಾಡಿದ್ದು ಅಂತ ?
-- ಅದ್ಯಾವ ಸೀಮೆ ಪತ್ತೇದಾರಿನೋ ? ಮೊದಲ ನೋಟಕ್ಕೆ ಕೊಲೆಗಾರ ಅನ್ನಿಸಿದೋನು ಕೊಲೆ ಮಾಡಿರೋದಿಲ್ಲ , ಇಷ್ಟೂ ಗೊತ್ತಿಲ್ವೇ ನಿಂಗೆ ?
--ನಾಯಕಿ ಇರ್ತಾಳಲ್ಲ ? ಅವಳೇ ಇರಬೇಕು . ಮೇಣದ ಬತ್ತಿ ಹಿಡಿದು ಸಂಶಯಾಸ್ಪದ ಆಗಿ ರಾತ್ರಿ ಹೊತ್ತು ಓಡಾಡ್ತ ಇರ್ತಾಳಲ್ಲ ?
ಒಂದು ವೇಳೆ ಅವಳಲ್ಲದಿದ್ರೆ ಯಾರನ್ನೋ ಬಚಾವು ಮಾಡೋಕೆ ಆ ತರ ಮಾಡ್ತಿರಬೇಕು . ನಮ್ಮ ಪತ್ತೇದಾರ ಅರಿಂಜಯ , ಮಧುಸೂಧನ ಪತ್ತೆ ಮಾಡಿರೋರು.
-- ನಂಗೆ ಅನ್ನಿಸುತ್ತೆ .. ನಾಟಕದ ಮೊದಲಿಗೆ ಯಾರೋ ಮೂರು ಜನ ಬಂದು ಹೋಗ್ತಾರಲ್ಲ , ಕಣಿ ಹೇಳೋರು ... ಅವರೇ ಇರಬೇಕು .. ಆಮೇಲೆ ಅವರು ಎಲ್ಲೂ ಕಾಣಿಸೋದೇ ಇಲ್ಲ ?
-- ಹೋಗಯ್ಯಾ , ಯಾವತ್ತಾದರೂ ಕೊಲೆಗಾರ ಗೆಸ್ಟ್ ಆರ್ಟಿಸ್ಟ್ ಆಗಿರ್ತಾನಾ ಒಂದೇ ಸಲ ಬಂದು ಹೋಗೋಕೆ ?
-- ಹಾಗಾದ್ರೆ ಮೊದಲು ಹೆಣ ನೋಡ್ದೋನು ಇರಬೇಕು , ಅಥವಾ ಶಾಮೀಲಾದ್ರೂ ಆಗಿರಬೇಕು ?
-- ಅದ್ಯಾಕೆ ಹಾಗಂತೀಯ ?
-- ಮೊದಲು ಹೆಣ ನೋಡಿದೋನು ಏನಯ್ಯ ಮಾಡ್ತಾನೆ ? ’ಯಪ್ಪೋ , ಇಲ್ಲೊಂದು ಖೂನಿ ! ’ ಅಂತ ಕಿರಿಚೋದು ಬಿಟ್ಟು ’ ಹಾ ಬಿದಿಯೆ .... ’ ಎಂದೇನೋ ಹಳಗನ್ನಡ ಪದ್ಯ ಹೇಳ್ತಾನಲ್ಲಯ್ಯಾ ? ಅಂದ್ರೆ ಮೊದ್ಲೇ ರೆಡಿ ಮಾಡ್ಕೊಂಡು ಬಂದಿದಾನೆ! ಪೋಲೀಸರು ಹಿಡಿದು ಒದ್ರೆ ನಿಜ ಹೇಳಿಯಾನು ! !.

ನೀವೂ ಓದಿ ನೋಡಿ , ನಿಮಗೂ ಏನಾದರೂ ತೋಚಬಹುದು ಯಾರು ಕೊಲೆಗಾರರು ಅಂತ ! ಎಂದು ಬರಹಗಾರರು ಸೂಚನೆ ಕೊಡ್ತಾರೆ !!

ಮನೇಲಿ ಎಲ್ಲೋ ಇರಬೇಕು . ಸಿಕ್ಕಾಗ ಯಾರು ಬರೆದದ್ದು ಅಂತ ಹೇಳ್ತೀನಿ.

Comments

umashankara bs said…
ಪ್ರೀತಿಯ ಕಲ್ ಸಕ್ರಿ ಯವರೆ ನಿಮ್ಮ ಬ್ಲಾಗ್ ನೋಡಿ ತುಂಬಾ ಸಂತೋಷವಾಯ್ತು....
ನಿಮ್ಮ ಬರವಣಿಗೆ ಯನ್ನು ಮುಂದುವರಿಸಿ...
ಇತಿ ಉಮಾಶಂಕರ
www.bidarakote.blogspot.com

Popular posts from this blog

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"