ಗಾಂಧೀಜಿಯೂ ಈಶೋಪನಿಷತ್ತೂ

ಇತ್ತೀಚೆಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡ ಒಂದು ಮಹಾತ್ಮಾಗಾಂಧೀಯವರ ಪುಸ್ತಕ-"ಜೀವನ ಶಿಕ್ಷಣ"ವನ್ನು ಓದುತ್ತಿದ್ದೆ. ಪ್ರಾರಂಭದಲ್ಲಿ ಅವರ ಕೆಲವು ಅನಿಸಿಕೆ/ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ಕೆಲವು ಗಮನಿಸುವಂತಹವು , ಕೆಲವು ಮತ್ತೆ ಮತ್ತೆ ಮೆಲುಕು ಹಾಕುವಂತಹವು, ನನಗಾಗಿ ಸಂಗ್ರಹಿಸಿಕೊಂಡ ಅವನ್ನು ನಿಮಗಾಗಿ ಇಲ್ಲಿ ಕುಟ್ಟಿದ್ದೇನೆ ( ಅಷ್ಟೇ ಅಲ್ಲ , ಈಶೋಪನಿಷತ್ತಿನ ಬಗ್ಗೆ ಅವರ ಒಂದು ಹೇಳಿಕೆಯಿಂದಾಗಿ ಈಶೋಪನಿಷತ್ತನ್ನು ತಿರುವಿ ಹಾಕಿದ ಬಗ್ಗೆಯೂ ಮುಂದಕ್ಕೆ ಬರೆದಿದ್ದೇನೆ). --ನಾನೊಬ್ಬ ಸತ್ಯಶೋಧಕ, ಅದಕ್ಕೊಂದು ಮಾರ್ಗವನ್ನು ಕಂಡುಹಿಡಿದಿದ್ದೇನೆ ಎಂದು ನನ್ನ ವಿಶ್ವಾಸ. ಅದರ ಸಿದ್ಧಿಗಾಗಿ ನಾನ್ನು ನಿರಂತರ ಪ್ರಯತ್ನಶೀಲನಾಗಿದ್ದೇನೆ ಎಂಬುದು ನನ್ನ ನಂಬಿಕೆ. ...... ನನ್ನ ನ್ಯೂನತೆಗಳು ಎಷ್ಟೆಂಬುದನ್ನು ನಾನು ವ್ಯಸನದಿಂದ ಅರಿತಿದ್ದೇನೆ. ಆ ಅರಿವು ನನಗೆ ದುಃಖ ತರುವಷ್ಟಿದೆ. ಆ ಅರಿವೇ ನನ್ನ ಸರ್ವಶಕ್ತಿಯ ಮೂಲ; ಏಕೆಂದರೆ ತನ್ನ ದೌರ್ಬಲ್ಯಗಳ ಅರಿವಾಗುವುದೇ ಮಾನವನಿಗೆ ಒಂದು ಅಪೂರ್ವ ಬಲ. --ದಾರಿ ನನಗೆ ಗೊತ್ತು. ಅದು ನೇರ ಮತ್ತು ಇಕ್ಕಟ್ಟು -ಕತ್ತಿಯ ಅಲಗಿನಂತೆ. ಅದರ ಮೇಲೆ ನಡೆವುದೆಂದರೆ(*) ನನಗೆ ಉಲ್ಲಾಸ, ಜಾರಿದಾಗಲೆಲ್ಲ ಕಣ್ಣೀರಿಡುತ್ತೇನೆ. ....ನನ್ನ ದೌರ್ಬಲ್ಯದ ಪರಿಣಾಮವಾಗಿ ಸಾವಿರ ಬಾರಿ ಸೋತರೂ ನಾನು ಎಂದಿಗೂ ಶೃದ್ಧೆಗೆಡುವುದಿಲ್ಲ. --ಸತ್ಯವೇ ಭಗವಂತನು , ನನ್ನ ಪಾಲಿಗೆ ಭಗವಂತನನ್ನು ಕಾಣಲು ಇರುವ ಒಂದೇ ಒಂದು ನಿಶ್ಚಿತ ಮಾರ್ಗವೆಂದರೆ ಅಹಿಂಸೆ ಮತ್ತು ಪ್ರೇಮ. --ಭಾರತ ಸ್ವಾತಂತ್ರ್ಯ ಸಾಧನೆಯೇ ನನ್ನ ಜೀವಿತೋದ್ದೇಶ. ಅದಕ್ಕಾಗಿ ನಾನು ಸಾಯಲು ಕೂಡ ಸಿದ್ಧ . ಏಕೆಂದರೆ ಭಾರತದ ಸ್ವಾತಂತ್ರ್ಯ ಸತ್ಯದ ಒಂದು ಅಂಶ. ಬಂಧವಿಮುಕ್ತವಾದಾಗಲೇ ಭರತಖಂಡ ಸತ್ಯಸ್ವರೂಪನಾದ ಭಗವಂತನನ್ನು ಪೂಜಿಸಬಲ್ಲದು. ಭಾರತದಲ್ಲಿ ಬದುಕಿ ಅದರ ಸಂಸ್ಕೃತಿಯನ್ನು ಪಡೆದಿರುವುದರಿಂದ ನನ್ನ ಸೇವೆಯ ಮೊದಲ ಹಕ್ಕು ಭಾರತದ್ದು, ನಾನು ಭಾರತಕ್ಕೆ ಮಾತ್ರ ಮೀಸಲಾದವನಲ್ಲ. ಬೇರೆ ಯಾವ ರಾಷ್ಟ್ರದ ಹಿತಕ್ಕೂ ಧಕ್ಕೆ ಒದಗಬಾರದು ಎಂಬುದಷ್ಟೇ ಅಲ್ಲ ; ಸಕಲ ರಾಷ್ಟ್ರಗಳಿಗೂ ಸರ್ವಲಾಭ ಒದಗಬೇಕು. ನಾನು ಸಂಕಲ್ಪಿಸಿರುವ ಭಾರತದ ಸ್ವಾತಂತ್ರ್ಯ ಎಂದಿಗೂ ಲೋಕಹಿತ ಕಂಟಕವಾದಲಾರದು. --ವಿಶ್ವಾತ್ಮಕವೂ ವಿಶ್ವವ್ಯಾಪಿಯೂ ಆದ ಸತ್ಯವನ್ನು ಸಾಕ್ಷಾತ್ತಾಗಿ ಕಂಡುಕೊಳ್ಳಬೇಕಾದರೆ ಸೃಷ್ಟಿಯಲ್ಲಿ ಕ್ಷುದ್ರತಮವಾದುದನ್ನೂ ತನ್ನಂತೆಯೇ ಪ್ರೀತಿಸುವುದು ಸಾಧ್ಯವಾಗಲೇಬೇಕು. ಆ ಹಂಬಲವನ್ನು ತುಂಬಿಕೊಂಡವನು ಜೀವನದ ಯಾವ ಕ್ಷೇತ್ರದಿಂದಲೂ ವಿಮುಖನಾಗುವುದು ಸಾಧ್ಯವಿಲ್ಲ. ನನ್ನ ಸತ್ಯಶೃದ್ಧೆ ನನ್ನನ್ನು ರಾಜಕೀಯಕ್ಕೆ ಎಳೆದು ತಂದಿರುವುದು ಓ ಕಾರಣದಿಂದಲೇ. ........................ಎಂದು ನಾನು ಸ್ವಲ್ಪವೂ ಅಳುಕದೇ, ಆದರೆ ವಿನೀತನಾಗಿ ಹೇಳಬಲ್ಲೆ. --ಭಗವಂತ ಅಸತ್ಯದ ಮೂರ್ತಿ ಎಂದೂ, ಹಿಂಸೆಯ ಮೂರ್ತಿ ಎಂದೂ ಯಾರಾದರೂ ಸ್ಥಿರಪಡಿಸಿದರೆ ಅಂತಹ ಭಗವಂತನನ್ನು ಪೂಜಿಸಲು ನಾನು ನಿರಾಕರಿಸುತ್ತೇನೆ. -- ನನ್ನ ರಾಜಕೀಯ ಕಲುಷಿತವಲ್ಲ, ನನ್ನ ಬದುಕು, ನನ್ನ ರಾಜಕೀಯ ಎಲ್ಲವೂ ಸತ್ಯ ಅಹಿಂಸೆಗಳೊಂದಿಗೆ ಜಟಿಲವಾಗಿ ಹೆಣೆದುಕೊಂಡಿವೆ. ಸತ್ಯವನ್ನು ಬಲಿಗೊಟ್ಟು ಸ್ವಾತಂತ್ರ್ಯ ಪಡೆಯುವುದಕ್ಕಿಂತ ಭಾರತ ವಿನಾಶ ಹೊಂದುವುದೇ ಹೆಚ್ಚು ಲೇಸೆಂಬುದು ನನ್ನ ಮತ. -- ಮಾನವ ಜೀವಿತದ ಪರಮೋದ್ದೇಶ ಭಗವಂತನ ಸಾಕ್ಷಾತ್ಕಾರ , ಮಾನವ ಸೇವೆಯು ಇದಕ್ಕೆ ಸಾಧನ. -- ಮನುಷ್ಯ ಎಷ್ಟರ ಮಟ್ಟಿಗೆ ಬೇರೆಯವರ ಹಿತಕ್ಕಾಗಿ ಶ್ರಮಿಸುತ್ತಾನೆಯೋ ಅಷ್ಟರ ಮಟ್ಟಿಗೆ ಅವನು ದೊಡ್ಡವನಾಗುತ್ತಾನೆ, -- ಮನುಷ್ಯನಂತೆ ಕ್ರಿಮಿಕೀಟಗಳೂ ಭಗವಂತನ ಸೃಷ್ಟಿಯೇ , ಹಾಗಾಗಿ ನಾನು ಸೋದರಭಾವ ಅಥವಾ ತಾದಾತ್ಮ್ಯವನ್ನು ಸಾಧಿಸಲೆಳಸುವುದು ಕೇವಲ ಮಾನವಜೀವಿಗಳೊಂದಿಗೆ ಮಾತ್ರವಲ್ಲ, ಸಮಸ್ತ ಕೀಟರಾಶಿಗಳೊಂದಿಗೆ. ಮೂಲತಃ ಎಲ್ಲ ಜೀವವೂ ಒಂದೇ. -- ಯಾವ ನೂತನ ಸಿದ್ಧಾಂತವನ್ನೂ ನಾನು ಮಂಡಿಸಿಲ್ಲ, ಅದರ ಬದಲು ಪುರಾತನ ಸಿದ್ಧಾಂತಗಳ ಪುನರ್ನಿರೂಪಣೆಯ ಪ್ರಯತ್ನವೇ ನನ್ನದು. -- ಸಕಲಶಾಸ್ತ್ರಗಳೂ ಒಂದುವೇಳೆ ವಿನಾಶ ಹೊಂದುವುದಾದರೂ ಹಿಂದೂಧರ್ಮದ ಸಾರವನ್ನು ಸಾರಲು ಈಶೋಪನಿಷತ್ತಿನ(**) ಮಂತ್ರ ಸಾಕು. -- ಗಾಂಧೀಪಂಥ ಎಂಬುದು ದೋಷದ ಪ್ರತೀಕವಾದರೆ , ಗಾಂಧೀಪಂಥ ಎಂಬುದು ಪಂಥಾಭಿಮಾನಕ್ಕೆ ಮತ್ತೊಂದು ಹೆಸರಾದರೆ ಅದು ನಾಶ ಹೊಂದಲಿ. ತಾನು ಗಾಂಧಿಯ ಅನುಯಾಯಿ ಎಂದು ಯಾರೊಬ್ಬನೂ ಹೇಳದಿರಲಿ. ನಾನು ನನ್ನನ್ನು ಅನುಸರಿಸಿದರೆ ಸಾಕು. ನಾನು ಎಂಥ ಅಸಮರ್ಪಕ ಅನುಯಾಯಿ ಎಂಬುದನ್ನು ನಾನು ಬಲ್ಲೆ. ಯಾವ ತತ್ವಗಳಿಗಾಗಿ ನಾನು ನಿಂತಿದ್ದೇನೆಯೋ ಅವುಗಳಿಗೆ ತಕ್ಕಂತೆ ನಾನು ಬಾಳುತ್ತಿಲ್ಲ. -- ನೀವು ಅನುಯಾಯಿಗಳಲ್ಲ ; ಸಹವಿದ್ಯಾರ್ಥಿಗಳು , ಸಹಯಾತ್ರಿಕರು, ಸಹಅನ್ವೇಷಕರು, ಸಹೋದ್ಯೋಗಿಗಳು. -- ನನ್ನ ಪಾಲಿಗೆ ಸತ್ಯವೇ ದೇವರು, ಸತ್ಯಸಾಧನೆಗೆ ಅಹಿಂಸೆ ಅಲ್ಲದೆ ಬೇರೆ ಹಾದಿಯಿಲ್ಲ . ಸತ್ಯ ಅಥವಾ ಭಗವಂತನನ್ನು ಬಲಿಗೊಟ್ಟು ಭಾರತದ ಸೇವೆಯನ್ನು ಮಾಡುವ ಯೋಚನೆಯನ್ನು ನಾನು ಮಾಡಲಾರೆ. ನಾನು ಬಲ್ಲೆ ಸತ್ಯವನ್ನು ಕೈಬಿಡಬಲ್ಲವನು ತನ್ನ ದೇಶವನ್ನೂ ಕೈಬಿಡಬಲ್ಲ , ಆಪ್ತೇಷ್ಟರನ್ನೂ ಕೈಬಿಡಬಲ್ಲ. ನನ್ನ ಆತ್ಮ ಮತ್ತು ಕರ್ತ ಮೆಚ್ಚುವಂತೆ ನಾನು ಹೋದೆಡೆಯಲ್ಲೆಲ್ಲ ನನ್ನ ಕರ್ಮಕ್ಷೇತ್ರದ ಗಾಯತ್ರಿಗಳಾದ ಈ ನನ್ನ ಧರ್ಮಸೂತ್ರಗಳನ್ನು ಸಾರುತ್ತ ಹೋಗುತ್ತೇನೆ. -- ನನ್ನದು ಧರ್ಮಮಾರ್ಗ , ನಾವು ಧರ್ಮಿಗಳು , ಉಳಿದವರಿಗಿಂತ ನಾವು ಶ್ರೇಷ್ಠರು ಎಂಬ ಅಹಂಭಾವ ನಮ್ಮನ್ನು ಆಕ್ರಮಿಸುವದರ ಬಗ್ಗೆ ಯಾವಾಗಲೂ ಎಚ್ಚರವಾಗಿರಬೇಕು . -- ನಾವು ಸತ್ಯ ಅಹಿಂಸೆಗಳ ನಿಜವಾದ ಆರಾಧಕರಾಗುವ ಪಕ್ಷದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಾಗಿ ಬೇಕಾಗುವ ಬುದ್ಧಿಶಕ್ತಿಯನ್ನು ಭಗವಂತನೇ ನಮಗೆ ದಯಪಾಲಿಸುತ್ತಾನೆ. ಎದುರಾಳಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವ ಇಚ್ಛೆ ಅಂತಹ ಶೃದ್ಧೆಯ ಅಗತ್ಯಭಾಗವಾಗಿದೆ. ಎದುರಾಳಿಯ ಮನಸ್ಸನ್ನು ಹೊಕ್ಕು ಆತನ ದೃಷ್ಟಿ ಏನೆಂಬುದನ್ನು ಅರಿಯಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. -- ನನ್ನ ಸಲಹೆಗಳಲ್ಲೆಲ್ಲ ಒಂದು ರಕ್ಷಾಸೂತ್ರ ಇದ್ದೇ ಇದೆ - ತಮ್ಮ ಬುದ್ಧಿಗೂ ಹೃದಯಕ್ಕೂ ಒಪ್ಪಿಗೆ ಆಗದಿದ್ದರೆ ಯಾರೂ ಅವುಗಳನ್ನು ಅನುಸರಿಸಬೇಕಾಗಿಲ್ಲ . -- ನನ್ನನ್ನು ಮೆಚ್ಚುವವರು ಮತ್ತು ನನ್ನ ಮಿತ್ರರು ಮಹಾತ್ಮ ಎಂಬುದನ್ನು ಮರೆತು ನನ್ನನ್ನು ಬರಿಯ 'ಗಾಂಧೀ ' ಎಂದು ಭಾವಿಸುವುದಾದರೆ ಅವರು ನನ್ನ ಮೆಚ್ಚುಗೆಗೆ ಹೆಚ್ಚಾಗಿ ಪಾತ್ರವಾಗುತ್ತಾರೆ . ನಾನು ಯಾವ ನನ್ನ ತತ್ವಗಳನ್ನು ಜೀವನದಲ್ಲಿ ಅನುಷ್ಠಾನ ಮಾಡಬೇಕೆಂದು ಕಾರ್ಯಕ್ರಮ ಹಾಕಿಕೊಂಡಿದ್ದೇನೆಯೋ ಅವನ್ನು ತಾವು ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು; ಇಲ್ಲವೆ ಅದರಲ್ಲಿ ಅವರಿಗೆ ನಂಬುಗೆ ಇರದಿದ್ದ ಪಕ್ಷದಲ್ಲಿ ಅದನ್ನು ಸರ್ವರೀತಿಯಿಂದಲೂ ವಿರೋಧಿಸಬೇಕು- ಇದೇ ನನ್ನ ಮಿತ್ರರು ನನಗೆ ತೋರಿಸಬಹುದಾದ ಪರಮ ಗೌರವ. -- ಯಾವ ಮಹಾ ಉದ್ಯಮದಲ್ಲಿಯಾದರೂ ಆಗಲಿ ನಿರ್ಣಯಕಾರಿಯಾಗುವುದು ಹೋರಾಡುವವರ ಸಂಖ್ಯೆ ಅಲ್ಲ , ಅವರ ಸತ್ವ . ನೀನು ಒಬ್ಬೊಂಟಿಯಾಗಿ ನಿಂತರೂ ಸರಿ , ಜಗತ್ತು ತನ್ನ ಕೆಂಗಣ್ಣಿನಿಂದ ದುರದುರನೆ ನೋಡಿದರೂ ಸರಿ, ಅಳುಕಬೇಡ. ಯಾವುದಕ್ಕಾಗಿ ನೀನು ಬದುಕಿದ್ದೀಯೋ , ಯಾವುದಕ್ಕಾಗಿ ನೀನು ದುಡಿಯಬೇಕೋ , ಅದಕ್ಕಾಗಿ ಮನೆ ಮಠ , ಮಡದಿ , ಮಕ್ಕಳು, ಸರ್ವಸ್ವವನ್ನೂ ತ್ಯಜಿಸು . ಆದರೆ ನಿನ್ನ ಹೃದಯದಲ್ಲಿ ನೆಲೆಸಿರುವ ಸತ್ಯದಲ್ಲಿ ನಿನಗೆ ಶೃದ್ಧೆ ಇರಲಿ, ಅದರ ಸತ್ಯಕ್ಕೆ ಸಾಕ್ಷಿಯಾಗಿ ಬಾಳು. (*) ಏನಿದು ಕತ್ತಿಯ ಅಲಗಿನ ಮೇಲೆ ನಡೆಯುವುದು? ಬಹುಶಃ ಅವರು ಆ ಹೊತ್ತಿನಲ್ಲಿ ಈ ಕೆಳಗಿನ ಸಂಸ್ಕೃತ ಸುಭಾಷಿತವನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕು ಪ್ರಿಯನ್ಯಾಯಾವೃತ್ತಿರ್ಮಲಿನಮಸುಭಂಗೇಪ್ಯಸುಕರಂ | ಮತ್ವಂ ಸತೋನಾಭ್ಯರ್ಥಾ: ಸುಹೃದಪಿ ನಯಾಚ್ಯ: ಕೃಶಧನ:|| ವಿಪದ್ಯುಚ್ಚೈ: ಸ್ಥೇಯಂ ಪದಮನುವಿಧೇಯಂ ಚ ಮಹತಾ ಸತಂ ಕೇನೋದ್ದಿಷ್ಟಂ ವಿಷಯಂ ಅಸಿಧಾರಾವೃತಮ್ || ಇದರ ಅರ್ಥ ಈ ಕೆಳಗಿನಂತೆ ಇದೆ - ಸಜ್ಜನರು ಶ್ರೇಯಸ್ಕರವಾದ ಸರಿಯಾದ ನ್ಯಾಯಮಾರ್ಗದಲ್ಲಿ ನಡೆಯುವರು. ಪ್ರಾಣ ಹೋಗುವ ಪ್ರಸಂಗ ಬಂದರೂ ತಮ್ಮ ವ್ಯಕ್ತಿತ್ವಕ್ಕೆ ಕಲಂಕ ಹಚ್ಚಿಕೊಳ್ಳಲಾರರು . ಆಪತ್ಕಾಲದಲ್ಲಿ ಸ್ಥಿರಚಿತ್ತರಿರುವರು. ಘನವಾದ ರೀತಿಯಲ್ಲಿ ನಡೆದುಕೊಳ್ಳುವರು. ಇಂಥ ಖಡ್ಗದ ಅಂಚಿನ ಮೇಲೆ ನಡೆಯುವ ಕಠಿಣ ವ್ರತವನ್ನು ಅವರಿಗೆ ಯಾರು ಹೇಳಿದರು? (**) "ಸಕಲಶಾಸ್ತ್ರಗಳೂ ಒಂದುವೇಳೆ ವಿನಾಶ ಹೊಂದುವುದಾದರೂ ಹಿಂದೂಧರ್ಮದ ಸಾರವನ್ನು ಸಾರಲು ಈಶೋಪನಿಷತ್ತಿನ ಮಂತ್ರ ಸಾಕು" ಎಂಬ ಸಾಲನ್ನು ನೋಡಿದಾಗ ಯಾವುದದು ಈಶೋಪನಿಷತ್ತಿನ ಸಾಲು ಎಂದು ನನ್ನ ಹತ್ತಿರ ಇದ್ದ - ಅದೇ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದ ಇನ್ನೊಂದು ಪುಸ್ತಕ - ಅಷ್ಟೋಪನಿಷತ್ - ಅನ್ನು ತಿರುವಿ ಹಾಕಿದೆ. ಅಲ್ಲಿ ಸಿಕ್ಕ ಸಾಲುಗಳಿವು -- ಈ ಜಗತ್ತಿನಲ್ಲಿ ಕರ್ಮ ಮಾಡುತ್ತಲೇ ನೂರು ವರ್ಷ ಬದುಕುವ ಅಪೇಕ್ಷೆಯನ್ನು ಹೊಂದಿರಬೇಕು. -- ಈ ಎಲ್ಲ ಜೀವಿಗಳೂ ತನ್ನ ಆತ್ಮನಿಂದ ಬೇರೆ ಅಲ್ಲ , ತನ್ನ ಆತ್ಮವೂ ಇತರ ಜೀವಿಗಳಿಗಿಂತ ಬೇರೆಯಲ್ಲ ಎಂದು ಅರಿತ ಜ್ಞಾನಿಯು ಆ ಜ್ಞಾನದ ಬಲದಿಂದ ಯಾರನ್ನೂ ದ್ವೇಷಿಸದ ಸ್ಥಿತಿಯನ್ನು ತಲುಪುತ್ತಾನೆ. ಸಕಲ ಸೃಷ್ಟಿಯ ಏಕತೆಯನ್ನು ಕಂಡ ಜ್ಞಾನಿಗೆ ಯಾವ ಮೋಹ ಮತ್ತು ಶೋಕ ತಾನೇ ಇರುವುದು? -- ಸತ್ಯದ ಮುಖವು ಹೊಳೆಯುವ ಬಂಗಾರದ ಮುಚ್ಚಳದಿಂದ ಮುಚ್ಚಲ್ಪಟ್ಟಿದೆ. ಓ ಸತ್ಯಪುರುಷನೇ ಆ ಮುಚ್ಚಳವನ್ನು ತೆರೆದು ಸತ್ಯ ಮತ್ತು ಧರ್ಮದ ಜ್ಯೋತಿಯನ್ನು ನಮಗೆ ತೋರಿಸು. -- ಓ ಅಗ್ನಿಯೇ ನಮ್ಮನ್ನು ಒಳ್ಳೆಯ ದಾರಿಯಲ್ಲಿ ನಡೆಸು. "ಸಕಲಶಾಸ್ತ್ರಗಳೂ ಒಂದುವೇಳೆ ವಿನಾಶ ಹೊಂದುವುದಾದರೂ ಹಿಂದೂಧರ್ಮದ ಸಾರವನ್ನು ಸಾರಲು ಈಶೋಪನಿಷತ್ತಿನ ಮಂತ್ರ ಸಾಕು " ಎಮ್ದನ್ನುವಾಗ ಬಹುಶಃ ಗಾಂಧಿಯವರ ಮನಸ್ಸಿನಲ್ಲಿ ಇದ್ದ ವಾಕ್ಯವು "ಈ ಎಲ್ಲ ಜೀವಿಗಳೂ ತನ್ನ ಆತ್ಮನಿಂದ ಬೇರೆ ಅಲ್ಲ , ತನ್ನ ಆತ್ಮವೂ ಇತರ ಜೀವಿಗಳಿಗಿಂತ ಬೇರೆಯಲ್ಲ ಎಂದು ಅರಿತ ಜ್ಞಾನಿಯು ಆ ಜ್ಞಾನದ ಬಲದಿಂದ ಯಾರನ್ನೂ ದ್ವೇಷಿಸದ ಸ್ಥಿತಿಯನ್ನು ತಲುಪುತ್ತಾನೆ. ಸಕಲ ಸೃಷ್ಟಿಯ ಏಕತೆಯನ್ನು ಕಂಡ ಜ್ಞಾನಿಗೆ ಯಾವ ಮೋಹ ಮತ್ತು ಶೋಕ ತಾನೇ ಇರುವುದು?" ಎಂಬುದೇ ಇರಬೇಕು, ಅಲ್ಲವೇ? ( ಅಂದ ಹಾಗೆ ನಾವು ಒಳ್ಳೆಯದನ್ನು ನೋಡುವಂತಾಗಲಿ ; ಒಳ್ಳೆಯದನ್ನು ಕೇಳುವಂತಾಗಲಿ ಎಂಬ ಅಶಯವು ಮುಂಡಕೋಪನಿಷತ್ತಿನಲ್ಲಿದೆ ; " ಕೆಟ್ಟದ್ದನ್ನು ಕೇಳಬೇಡ ; ಆಡಬೇಡ; ನೋಡಬೇಡ" ಎಂಬುದನ್ನು ಸೂಚಿಸುವ ಮೂರು ಕೋತಿಗಳ ಗಾಂಧಿಯವರ ಇಷ್ಟದ ಪ್ರತಿಮೆಯನ್ನು ನೆನಪಿಸಿತು)

Comments

Popular posts from this blog

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು