ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು
ನಾಲ್ಕೈದು ತಿಂಗಳಿಂದ ಕೊಂಡು ಇಟ್ಟುಕೊಂಡಿದ್ದ 'ಕಸ್ತೂರಿ' ಸಂಚಿಕೆಗಳನ್ನು ಇತ್ತೀಚೆಗೆ ಓದಿದೆ. ತಕ್ಷಣ ಓದಲಾಗದಿದ್ದರೂ ತಡವಾಗಿ ಆದರೂ ಓದಿದ ಸಂತೋಷ ನನ್ನದಾಯಿತು. ಒಂದರಲ್ಲಿ ಕಸ್ತೂರಿಯ ಆರಂಭದ ಕುರಿತಾದ ಸಂಗತಿಗಳಿವೆ, ಆರಂಭದಿಂದಲೂ ಕಸ್ತೂರಿಯನ್ನು ಓದಿದ ಜನರ ಅನಿಸಿಕೆಗಳಿವೆ. ಟಾಂ ಸಾಯರ್ ಸಾಹಸಗಳ ಸಂಗತಿ ಪುಸ್ತಕ ವಿಭಾಗದಲ್ಲಿ ಸಿಕ್ಕಿತು. ಮಹಾತ್ಮಾ ಗಾಂಧಿಯವರ ಕೊನೆಯ ದಿನದ ಸಂಗತಿಗಳು ವಿವರವಾಗಿ ಇಲ್ಲಿ ಬಂದಿವೆ. ಮನುಷ್ಯನಿಗೆ ಸಾವು ಸಮೀಪಿಸಿದಾಗ ಹೇಗೋ ಆತನ ಬಾಯಿಂದ ಸಾವಿನ ಕುರಿತಾದ ಮಾತುಗಳು ಬರುತ್ತವಂತೆ. ಗಾಂಧೀಗಾಗಿ ರಾತ್ರಿ ಬೇಕಾಗುವ ಯಾರೋ ಲವಂಗದ ಪುಡಿಯನ್ನು ಬೆಳಿಗ್ಗೆ ತಯಾರು ಮಾಡುವ ಸಂಬಂಧ - ಗಾಂಧಿಯವರು 'ಈಗ ಏಕೆ ಮಾಡುತ್ತ ಕೂತಿದ್ದಾರೆ? ರಾತ್ರಿ ನಾನೇ ಇರುತ್ತೇನೋ ಇಲ್ಲವೋ ' ಎನ್ನುತ್ತಾರೆ. ಪತ್ರಿಕೆಯಲ್ಲೆಲ್ಲೋ ಗಾಂಧಿಯವರು ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗಲಿದ್ದಾರೆ ಎಂಬ ಸಂಗತಿ ಅಚ್ಚಾಗಿರುತ್ತದೆ, ಅದಕ್ಕೆ ಗಾಂಧಿಯವರು 'ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗುವ ಗಾಂಧಿ ಯಾರೋ? ' ಎಂದು ಪ್ರತಿಕ್ರಿಯಿಸುತ್ತಾರೆ ಎಂಬಂತಹ ಸಂಗತಿಗಳು ಮೈನವಿರೇಳಿಸುತ್ತವೆ. ಬ್ರಿಟಿಷರ ವಿರುದ್ದ ಬಂಡೆದ್ದ ನರಗುಂದ ಬಾಬಾಸಾಹೇಬನು ಗಲ್ಲಿಗೇರಲಿಲ್ಲವಂತೆ. ಈತನ ಹೆಂಡತಿ ಧಾರವಾಡದ ಕಲೆಕ್ಟರನ ಹೆಂಡತಿಯನ್ನು ಹಾವಿನ ಕಡಿತದಿಂದ ಸಾಯುವುದನ್ನು ತಪ್ಪಿಸಿದ್ದಳಂತೆ. ಈತನನ್ನ ಗಲ್ಲಿಗೇರಿಸಬೇಕಾದ ಅಧಿಕಾರಿಯು ಅದೇ ಕ...